ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday, 22 September 2011

"ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ"
ನಂಬಲು ಆಗುತ್ತಿಲ್ಲ ಒಂದೇ ಒಂದುವಾರದಲ್ಲಿ ಏನೆಲ್ಲ ಆಗಿ ಹೋಯಿತು ನನ್ನ ಜೀವನದಲ್ಲಿ , ಎಲ್ಲಾ ಒಂದು ಕೆಟ್ಟ ಕನಸು ಅಂದು ಕೊಂಡು ನಿದ್ದೆಯಿಂದ ಎದ್ದು ಬಿಡೋಣ ಅಂತ ಅನಿಸುತ್ತೆ ಅಜ್ಜಿ, ಆದರೆ ಅದೆಲ್ಲವೂ ವಾಸ್ತವ ಅನಿಸಿದಾಗ ಆದ ನೋವು ಅಷ್ಟಿಷ್ಟಲ್ಲ . ಅಷ್ಟೊಂದು ಅವಸರವೆನಿತ್ತು ಅಜ್ಜಿ ಒಂದು ಮಾತು ಹೇಳದೆ ನಿದ್ರೆಯಿಂದ ಚಿರ ನಿದ್ರೆಗೆ ಜಾರುವಷ್ಟು...! 

ಹೇಳದೆ ಹೋದೆ ನೀ ಯಾರಿಗೂ
ನಿದ್ರೆಗೂ ಚಿರ ನಿದ್ರೆಗೂ 
ಇರುವ ಅಂತರವ 
ತಿಳಿಸುವ ನೆಪದಲ್ಲಿ
ತಿರುಗಿ ಬಾರದ ಊರಿಗೆ..! 

(My grand mother )
ಅಪ್ಪ ಕೈಬಿಟ್ಟಾಗ ಜೀವನಕ್ಕೆ ಹೆದರಲಿಲ್ಲ, ಮಾಮ ದೂರಾದಾಗ ಅತಿ ದುಃಖದಲ್ಲಿ ಮುಳುಗಲಿಲ್ಲ, ಕೆಲಸವಿಲ್ಲದೇ ಕೆಲಸಕ್ಕಾಗಿ ಅಲೆಯುವಾಗ ವಿಚಲಿತನಾಗಲಿಲ್ಲ ಆದರೆ ಅಂದು ನಡು ರಾತ್ರಿ ಬಂದ ನೀ ತಿರುಗಿ ಬಾರದ ದಾರಿಯಲ್ಲಿ ಒಬ್ಬಳೇ ಹೋದೆ ಅನ್ನೋ ಒಂದು ಭಯಂಕರ ಫೋನ್ ಕಾಲ್ ಗೆ ನಾ ಕಟ್ಟಿದ್ದ ಎಲ್ಲಾ ಕನಸುಗಳು ಆಸೆಗಳು ನನ್ನಲ್ಲಿನ ಆಸಕ್ತಿ ಉತ್ಸಾಹಗಳು ಕ್ಷಣಾರ್ಧದಲ್ಲೇ ತಡೆಯಲಾಗದ ನೋವಿನ ಸುನಾಮಿಯಲ್ಲಿ ಕೊಚ್ಚಿ ಹೋದವು..!  ಎಂದೋ ಆಗುವ ಪ್ರಪಂಚದ ಅಂತ್ಯ ಆಗಬಾರದೇಕೆ ಈ ಕ್ಷಣವೇ ಅಂತ ಅನಿಸಿದ್ದು  ವಿಜಯನಗರ ಬಸ್ ಸ್ಟಾಪ್ ನಲ್ಲಿ ರಾತ್ರಿ ಒಂದು ಗಂಟೆಗೆ ಮಜೆಸ್ಟಿಕ್ ಬಸ್ ಗಾಗಿ ಕಾದು ಕೂತಾಗ....! 

ಉಕ್ಕಿ ಬರುವ ದುಃಖವ 
ತಡೆದು ಕೂತೆ ನಾನು 
ನಿನ್ನ ನೋಡೋ ಅವಸರದಿ 
ಎಷ್ಟು ಮೈಲಿಗಳ ದೂರದಲ್ಲಿ....! 

ಇನ್ನೂ ನೆನಪಿದೆ ಅಜ್ಜಿ ನನಗಾಗಿ ನೀ ಪಟ್ಟ ಕಷ್ಟ ಸುಡೋ ಬಿಸಿಲಲ್ಲಿ ನಡು ರಾತ್ರಿ ಕತ್ತಲಲ್ಲಿ ಅದು ಎಷ್ಟು ಬಾರಿ ನನ್ನ ಹೊತ್ತುಕೊಂಡು ಆಸ್ಪತ್ರೆಯ ಮೆಟ್ಟಿಲ್ಲು ಹತ್ತಿದ್ದಿ, ಅದೆಷ್ಟು ದೇವರಿಗೆ ಹರಕೆಗಳನ್ನೂ ಹೊತ್ತು ಪೂಜೆ ಸಲ್ಲಿಸಿದ್ದಿ,  ಈಗ್ಲೂ ನೀನಿಲ್ಲ ಅಂತ ಅಂದುಕೊಂಡರೆ ತುಂಬಾ ನೋವಾಗುತ್ತೆ, ಸಮುದ್ರದ ಮಧ್ಯೆ ನಾ ನಿಂತ ಹಡಗು ಧಿಡಿರನೆ ಮುಳುಗಿ ಹೋದರೆ ದಡ ತಲುಪುವುದಾದರೂ ಹೇಗೆ..? ನೀನೆಲ್ಲೋ ಇದ್ದೀಯ ನನ್ನ ಕಾಯುತ್ತಿದ್ದಿಯ, ಹುಟ್ಟು ಹಾಕಿ ತಲುಪಿಸಬೇಕಾದ ದಡಕ್ಕೆ ನನ್ನನ್ನು ತಲುಪಿಸುತ್ತಿಯಾ ಅನ್ನೋ ನಂಬಿಕೆ ನನಗೆ ಅಂದಿಗೂ ಇಂದಿಗೂ ಇದ್ದೆ ಇದೇ..!  

ನೀನಿರುವೆ ಅನ್ನೋ 
ಕಹಿ ನಂಬಿಕೆ ಸಾಕು 
ಆಳೆತ್ತರದ ಅಲೆಗಳ ದಾಟಿ
ಕನಸುಗಳ ದೋಣಿ ಮುಳುಗದಂತೆ 
ನಾವಿಕನಾಗಿ ದಡ ಸೇರುವೆ...! 

ನೀನಿದ್ದಗೆಲ್ಲ ಹೇಳ್ತಾ ಇದ್ದೆ ಅಜ್ಜಿ "ಪ್ರತಿ ದಿನ ದೇವರ ಫೋಟೋಗೆ ಕೈ ಮುಗಿ ಅಂತ ಬಟ್ ಈಗ ಅಮ್ಮ ಹೇಳ್ತಾಳೆ ಅಜ್ಜಿ ಫೋಟೋಗೆ ಕೈ ಮುಗಿದು ಹೋಗು ಅಂತ" ಕಾಲಾಯ ತಸ್ಮೈ ನಮಃ  ಅನ್ನೋದು ಇದಕ್ಕೇನಾ...? ಮಮತೆ ಪ್ರೀತಿ ವಾತ್ಸಲ್ಯ ಸಂಕಟ ನೋವು ಕಣ್ಣಿರು ದುಃಖ ಇವುಗಳ ಮೌಲ್ಯ ಈಗ ನನಗೆ ಅರಿವಾಗಿದೆ ಅಜ್ಜಿ, ದುಃಖದಲ್ಲಿ ಇದ್ದ ನನ್ನ ಎಲ್ಲಾ ಸ್ನೇಹಿತರಿಗೂ ನಾನು ಸಾಂತ್ವಾನ ಈಜಿ ಆಗಿ ಹೇಳ್ತಾ ಇದ್ದೆ ಬಟ್ ಅದನ್ನ ಅನುಭವಿದಾಗಲೇ ನನಗೆ ಗೊತ್ತಾಗಿದ್ದು "ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ" ಅಂತ.

ನೀನಿಲ್ಲದ ಮನೆಯಲ್ಲಿ 
ನಿಲ್ಲಲಾರದ ಕಣ್ಣಿರು 
ತುತ್ತು ತುತ್ತಿಗೂ ನಿನ್ನ ನೆನಪು
ಬಂದು ಹೋಗು ಅಜ್ಜಿ ಮತ್ತೆ ಒಮ್ಮೆ
ಮಡಿಲಲ್ಲಿ ನಾ ಮಲಗಿ ನಿದ್ರಿಸುವೆ...! ಪ್ರೀತಿಯಿಂದ
ದೊಡ್ಡಮನಿ.ಎಂ.ಮಂಜುನಾಥ
~$ಮರೀಚಿಕೆ$~

2 comments:

 1. ಕಣ್ಣೀರಧಾರೆ ತುಂಬಿ ಹರಿಯುತಿದೆ ನನ್ನಲೂ ಈಗ..!! :(
  ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ..
  ಈಗ ಅಜ್ಜಿಯ ಆಟ ಮುಗಿಸಿದ ,,
  ನಾಳೆ ನಮ್ಮಯ ಆಟವನ್ನೂ ಮುಗಿಸುವನು..!! :(

  ReplyDelete
 2. thq for the comments @ಸವಿ ನೆನಪುಗಳು..!!

  ReplyDelete