ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday 9 April 2012

ನಿನ್ನ ನೆನಪು ಮಾಡಿಕೊಂಡು ಒಬ್ಬನೇ ಈ ಬೆಟ್ಟದ ತುದಿಯಲಿ..!

ಓಲೆಗರಿ 2 


ತೆರೆದರೆ ಮುಚ್ಚ ಬಯಸದ 
ನೆನಪಿನ ಪುಟಗಳು
ಎದೆಗೊಮ್ಮೆ ಅಪ್ಪಿಕೊಂಡು 
ಮತ್ತೆ ಮತ್ತೆ ಮುತ್ತಿಡುವೆ
ನೀನಿರದ ವೇಳೆ ನಾನೇ ಬರೆದ 
ಡೈರಿಯ ಕೈಯಲಿ ಹಿಡಿದು..! 

- ಮುಚ್ಚಿದ ಪುಟಗಳ ತೆರೆಯುತ್ತ ಹೋದರೆ ಸವಿದಷ್ಟು ಸವಿಯಬೇಕೆನಿಸುವ ಆ ನೆನಪುಗಳು ಇಂದಿಗೂ ನನ್ನ ಬಳಿ ಜೀವಂತ; ಕ್ಷಣ ನೆನೆದರೆ ದೃಶ್ಯಾವಳಿಯಂತೆ ಕಣ್ಣ ಮುಂದೆ ಗೋಚರಿಸುತ್ತವೆ ಕುಮುದ, ಆ ವಯಸ್ಸಿನಲ್ಲೇ ಹುಡುಗ ಹುಡುಗಿ ಇಬ್ಬರು  ಜೊತೆಗೆ ಕೈ ಕೈ ಹಿಡಿದು ರಸ್ತೆ ಬದಿಯಲ್ಲಿ ನಡೆದು ಹೋಗುವುದೆಂದರೆ ಅಂದಿನ ಮಟ್ಟಿಗೆ ಸಾಮಾನ್ಯ ಮಾತಲ್ಲ, ಆದರು ನೀನು ನನ್ನ ಕೈ ಹಿಡಿದು ಎದೆಗೊರಗಿ ನಡೆಯುತ್ತಿದ್ದೆಯಲ್ಲ ಅಂದು ನಿನಗಿದ್ದ  ಆ ಧೈರ್ಯ ನನಗಿರಲಿಲ್ಲ  ಬಿಡು. ನೆನಪಿದೆಯ ಕುಮುದ ಆ ಒಂದು ಸಂಜೆ ಅದೇಕೋ ಸೂರ್ಯನ ಸುಳಿವಿರಲಿಲ್ಲ ತಾರೆಗಳನೆಲ್ಲ ತವರಿಗೆ ಕಳುಹಿಸಿ ಬೆಳ್ಳಿ ಮುಗಿಲು ಕಪ್ಪು ಬಟ್ಟೆಯ ತೊಟ್ಟು ನಿಂತಾಗ ಯಾವುದರ ಸುಳಿವಿಲ್ಲದೆ ಬಂತಲ್ಲ ಘನಘೋರ ಮಳೆ ನಾವು ನಾಲ್ಕು ಹೆಜ್ಜೆ ಇಡುವಷ್ಟರಲ್ಲೇ ತೋಯ್ದು ತೊಪ್ಪೆಯಾದಾಗ ನೀನು  ನನ್ನ ಬಿಗಿಯಾಗಿ ಅಪ್ಪಿಕೊಂಡ ಕ್ಷಣ. ಅಂದು ನೀ  ನನಗಿಷ್ಟವಿಲ್ಲದ ತೆಳುವಾದ ಬಿಳಿ ಟೀ ಶರ್ಟ್ ಹಾಕಿದ್ದೆ ಒಂದು ನೂರು ಬಾರಿ ಹೇಳಿದ್ದೆನೇನೋ ಆ ಟಿ ಶರ್ಟ್ ಹಾಕ್ಬೇಡ ಅಂತ, ನಿಜ ಹೇಳಲಾ ಕುಮುದ .. ಎಂದೂ ನಿನ್ನ ಸರಿಯಾಗಿ ನೋಡದವನು ಅಂದು ನೀನು ಮಳೆಗೆ ತೋಯ್ದು ನಡುಗುತ್ತಿದ್ದಾಗ ಕಣ್ಣು ಮಿಟುಕದೆ ನೋಡುತ್ತಿದ್ದೆ, ಅಂದು ನಿನ್ನ ಸೌಂದರ್ಯ ಹೆಚ್ಚು ಮಾಡಿದ್ದು ಮಳೆಯೋ ಇಲ್ಲಾ ನೀನು ಹಾಕಿದ ಆ ಟಿ ಶರ್ಟೋ.. ಇಂದಿಗೂ ಬಗೆ ಹರಿಯದ ಪ್ರಶ್ನೆ..  ಅಂದಿನಿಂದ ಇಂದಿನವರೆಗೂ ಮತ್ತೆ ಆ ಮಳೆಗಾಗಿ ಕಾಯುತ್ತಿದ್ದೇನೆ ಕುಮುದ... ಸಾಧ್ಯವಾದಲ್ಲಿ ಮತ್ತೊಮ್ಮೆ ಅದೇ ಟೀ ಶರ್ಟ್ ತೊಟ್ಟು ನನ್ನ ಮುಂದೆ ಬರುತ್ತಿಯಾ..? ಮತ್ತೊಮ್ಮೆ ಹುಡುಕಿ ಹೇಳುವ ಆಸೆ ನಿನ್ನ ಕಣ್ಣಿಗೆ ಕಾಣದ ಬೆನ್ನ ಹಿಂದಿನ ಮಚ್ಚೆಯ ಗುರುತನ್ನ... 


ಸಂಜೆ ಬಿಗಿ ಅಪ್ಪುಗೆಯ ಜೊತೆ 
ರಸ್ತೆಯ ಬದಿ ಹೃದಯಗಳ ಸಂಚಾರ 
ನೆನಪಿನ ಪುಟಗಳ ತುಂಬಾ 
ಬರೀ ನಿನ್ನದೇ ಹಸ್ತಾಕ್ಷರ..! 
  
ಸಂಜೆಯ ಸಣ್ಣ ವಾಕ್ ಮುಗಿಸಿ  ಫುಟ್ಪಾತ್ ನಲ್ಲಿ  ನಿಂತು ನಿನ್ನ ಜೊತೆ ಪಾನಿಪುರಿ ತಿನ್ನದಿದ್ದರೆ ಆ ಸಂಜೆಗೆ ಆರ್ಥವೆ ಇರುತ್ತಿರಲಿಲ್ಲ, ಪಾನಿಪುರಿ ಅಂಗಡಿಯವನಿಗಂತೂ ನಾವು ಪರಿಚಿತ ಎಷ್ಟೇ ಜನರ ಆರ್ಡರ್ ಇದ್ದರೂ ನಾನು ಕೇಳುವ ಮುನ್ನವೇ ನಮಗೆ ಸಿದ್ದಮಾಡಿ ಕೊಡುತ್ತಿದ್ದ.. ನೆನಪಿರಬೇಕಲ್ಲವೇ ಒಮ್ಮೆ ಆತ "ಸೂಪರ್ ಜೋಡಿ ಸರ್ ನಿಮ್ಮದು" ಎಂದು ಹೇಳಿದ ಮಾತು ಬೊಗ್ಗಸೆ ಬೆರಗಾಗಿ ಕಣ್ಣು ಕಣ್ಣು ಬಿಟ್ಟು ನಮ್ಮ ಮೂಖ ನಾವೇ ನೋಡಿಕೊಂಡದ್ದು, ಅಂದೇ ಅಲ್ಲವೇ ನಮ್ಮ ಪ್ರೀತಿಯ ಚಿಲುಮೆ ಮತ್ತಷ್ಟು ಹೆಚ್ಚಿದ್ದು,  ನಿನ್ನ ಮೂಖದ ಕಾಂತಿ ಆ ಸಂಜೆಯ ಹಾದಿಯಲ್ಲಿ ಬೆಳದಿಂಗಳಂತೆ ಹೊಳೆದಿದ್ದು, ಮರಳಿ ಬರುವಾಗ ಸಡಿಲವಾದ ಅಪ್ಪುಗೆ ಮತ್ತಷ್ಟು ಬಿಗಿಯಾದದ್ದು, ಮತ್ತೆ ಮತ್ತೆ ಅವನ ಮಾತುಗಳೇ ಕಿವಿಗಳಿಗೆ ಪುನಃ ಪುನಃ ಕೇಳಿದಂತೆ ಭಾಸವಾಗಿದ್ದು, ಆತ ಬೇಡವೆಂದರೂ ನೀನೆ ಆತನಿಗೆ 50/- ರೂಪಾಯಿ ಟಿಪ್ಸ್ ಕೊಟ್ಟಿದ್ದು, ರಾತ್ರಿಯೆಲ್ಲ ನಿದ್ದೆ ಇಲ್ಲದೆ ಅವನ ಮಾತನ್ನೇ ಮೆಲಕು ಹಾಕಿದ್ದು, ಪದೇ ಪದೇ ನೀನು ನನಗೆ ಮೆಸೇಜ್ ಮಾಡಿದ್ದು, ಆತನ ಅಂದಿನ ಮಾತಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲೋದಿಲ್ಲ ಅನಿಸುತ್ತೆ ಅಲ್ವ.! . ಬಲು ಬೇಗ ಬಂದು ಬಿಡು ಮತ್ತೊಮ್ಮೆ  ನಿನ್ನ ಜೊತೆಗೆ ಪಾನಿಪುರಿ ತಿನ್ನಬೇಕು ಆತನ ಬಾಯಲ್ಲೇ ಅದೇ  ಮಾತ ನಾ ಕೇಳಬೇಕು.. ಬರುವೆಯ...?

ಬೆಟ್ಟದ ತುದಿಯಲಿ 
ಸುಡುವ ಸೂರ್ಯನ ಮುಂದೆ 
ತಣ್ಣನೆ ಗಾಳಿಯಲಿ 
ನೀ ಕೊಟ್ಟ ಮುತ್ತು
ಮರುಕಳಿಸುವುದೆಂತೋ..? 
 
ಬರುವ ಪ್ರತಿ ಸಂಜೆಗಳನ್ನು ಹಿಯಾಳಿಸುತ್ತೇನೆ ಬೈಯುತ್ತೇನೆ ಬೇಕೆಂದೇ ಮತ್ತೆ ಮತ್ತೆ ನಿನ್ನ ನೆನಪು ಮಾಡಿಕೊಂಡು ಒಬ್ಬನೇ ಈ ಬೆಟ್ಟದ ತುದಿಯಲಿ ಕೂತು ಕಣ್ಣೀರಾಗುತ್ತೇನೆ, ನಿನ್ನ ಮರೆಯುವ ಪ್ರತಿಯೊಂದು ಪ್ರಯತ್ನದಲ್ಲೂ ಸೋಲಿನ ಸರದಾರನಾಗುತ್ತೇನೆ. ನಿನಗೆ ನೆನೆಪಿದಿಯಾ ಎಂದು ಮತ್ತೊಮ್ಮೆ ಕೇಳಲಾರೆ ನಿನಗು ಮನಸ್ಸಿದೆ ಅದಕ್ಕೂ ಮಿಗಿಲಾಗಿ ಇಂತಹ ಎಷ್ಟೋ ಸಂಜೆಗಳ ನೆನಪುಗಳು ನಿನ್ನ ಬಳಿ ಇದ್ದೆ ಇವೆ. ಅಚಾನಕ್  ಆಗಿ ಗಾಳಿಗೆ ಹಾರಿ ಮರದ ಮೇಲೆಲ್ಲೋ ಕೂತ ಆ ನಿನ್ನ ದಾವಣಿಯನ್ನ  ಹಿಡಿದು ತಂದು ಕೊಡುವಾಗ ಶುಲ್ಕವಾಗಿ ನಾ ಮರಳಿ ನಿನ್ನಿಂದ ಪಡೆದ ಆ ಮುತ್ತು ಇನ್ನೂ ಹಸಿ ಹಸಿಯಾಗಿ ಕೆನ್ನೆ ಮೇಲಿದೆ.. ಏನೇ ಹೇಳು ಸೂರ್ಯನ ಕೆನ್ನೆಗೆ ಬೆಣ್ಣೆ ತಾಕಿದಹಾಗೆ ನೀ ಕೊಟ್ಟ ಆ ಮುತ್ತು.. ನಿನ್ನ ಮುತ್ತಿಗೆ ಮತ್ತೇರಿ ಅಂದು ಕರಗಿದ್ದು ನಾನ ನೀನಾ ಇಂದಿಗೂ ಅದೊಂದು ಉತ್ತರ ಸಿಗದ ಪ್ರಶ್ನೆಯಾಗೇ ಉಳಿದಿದೆ... ನೀ ಮುತ್ತನಿಡುವಾಗ ಯಾರು ನೋಡಬಾರದೆಂದುಕೊಂಡೆ ನೀ ಮುತ್ತನಿಟ್ಟೆ  ಆದರೆ ಬೆಟ್ಟದ ತುದಿಯ ಆಳದಲ್ಲಿ ಮುಳುಗುತಿದ್ದ ಆ ಸೂರ್ಯ ನೋಡಿ ಮರೆಯಾದ..  ನಿಜ ಹೇಳಲಾ ಅವನು ತುಂಬಾ ಪ್ರಾಮಾಣಿಕ ನನ್ನಂತೆಯೇ ಯಾರಿಗೂ ನಮ್ಮ ಮುತ್ತಿನ ವಿಷಯ ಹೇಳದವನು ಆದರೆ ನೀ ಬಿಟ್ಟು ಹೋದ ದಿನದಿಂದ ಒಬ್ಬನೇ ಈ ಬೆಟ್ಟದಲ್ಲಿ ನಾ ಕೂತಾಗ  ಆ ಮುಳುಗುವ ಸೂರ್ಯ ನನ್ನ ನೋಡಿ ವ್ಯಂಗ್ಯವಾಗಿ ನಗುತ್ತಾನೆ.. ದಯಮಾಡಿ ಒಮ್ಮೆ ಬಂದುಬಿಡು ಅವನು ನನ್ನ ನೋಡಿ ಹೀಗೆ ನಗದಂತೆ ಆಜ್ಞೆ ಮಾಡು, ಹಾಗೆ ಗಾಳಿಗೆ ಮತ್ತೊಮ್ಮೆ ನಿನ್ನ ದಾವಣಿ ಹಾರಬಿಡು ಹಿಡಿದು ತಂದುಕೊಟ್ಟು ಶುಲ್ಕವಾಗಿ ಮತ್ತೆ ಮತ್ತೆ ಮುತ್ತಾ ಪಡೆವೆ ಬರುವೆಯ..?

?ದೊಡ್ಡಮನಿ.ಎಂ.ಮಂಜು

1 comment: