ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday, 2 August 2012

ಅವಳು ಅವನು ಮತ್ತೆ ನಾವು...!


ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish ರವರಿಗೆ ಶುಭವಾಗಲಿ....
ಅವಳು ಅವನು ಮತ್ತೆ ನಾವು...!

-   ತುಳಸಿ ಕಟ್ಟೆಯ ಮದ್ಯೆ ಹಚ್ಚಿದ ನಂದಾ ದೀಪದಂತೆ ಅವಳ ಸಂಸಾರ. ಬದುಕೆಂದರೆ ಅವಳಿಗೆ ಅವನು ಅವನಿಗೆ ಇವಳು ಅಷ್ಟೇ... ಲೋಕದ ಯಾವ ಶಕ್ತಿಯು ಅವರನ್ನು ಬೇರ್ಪಡಿಸಲಾರದಂತ ನಿಷ್ಕಲ್ಮಶ ಪ್ರೇಮ ಅವರದು,  ಮನೆಯವರ ವಿರೋದದಿಂದ ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಆದ ಅವಳ ಮದುವೆಗೆ ಇನ್ನೂ ವರ್ಷ ಕೂಡ ತುಂಬಿಲ್ಲ, ಬಾಡಿಗೆ ಮನೆಯೊಂದರ ಹೊಸ್ತಿಲ ಮೇಲೆ ತುಂಬಿಟ್ಟ ಅಕ್ಕಿಯ ಸೇರನ್ನ  ಬಲಗಾಲಲ್ಲಿ ಒದ್ದು  ದೇವರ ಕೋಣೆಯಲ್ಲಿ ದೀಪ ಹಚ್ಚಿದ ನೆನಪು ಇನ್ನೂ ಮಾಸಿಲ್ಲ, ತಾನು ಕಳೆದುಕೊಂಡ ಅಣ್ಣ ತಂಗಿ ಅಪ್ಪ ಅಮ್ಮ ಎಲ್ಲಾ ಪ್ರೀತಿಯನ್ನು ಅವನಲಿ ಕಂಡುಕೊಂಡಿದ್ದಾಳೆ , ಆಗಲೇ ಆ ಸಣ್ಣ ಮನೆಯಲಿ ತೊಟ್ಟಿಲು ತೂಗಲು ಸಿದ್ದಳಾಗಿ ನೆಮ್ಮದಿಯ ತೇರು ಎಳೆಯಲು ತಯಾರಾಗಿ ನಿಂತಿದ್ದಾಳೆ, ಅವನ ಜೊತೆ ಕಟ್ಟಿದ ಕನಸುಗಳನ್ನ ರಾಶಿ ಹಾಕಿ ಲೆಕ್ಕ ಹಾಕುತ್ತ ಸಂಜೆ ಅವನು ತರುವ ಮಲ್ಲಿಗೆಗಾಗಿ ಕಾಯುತ್ತಿದ್ದಾಳೆ..


ಸಂಜೆಯಾಗಿದೆ ಸೂರ್ಯ ಮುಳುಗುತ್ತಿದ್ದಾನೆ ಅವಳ ಕಾಯುವಿಕೆ ನಿಂತಿದೆ ಜೊತೆಗೆ ಎದೆ ಬಡಿತ ಹೆಚ್ಚಿದೆ ಅದೋ ಬೆಳ್ಳಿ ತೇರಿನಿಂದ ಅವನನ್ನು ಬಿಳಿ ವಸ್ತ್ರದಾರಿಗಳ್ಯಾರೋ ಕರೆದುಕೊಂಡು ಬರುತ್ತಿದ್ದರೆ ಬಂದವರು ಮನೆಯ ಒಳಗೆ ಮಲಗಿಸಿ ಕೈ ಕಟ್ಟಿ ನಿಂತಿದ್ದರೆ.ಅವನ ಕೈಯಲ್ಲಿ ಹರಿದು ತುಂಡಾದ ಮಲ್ಲಿಗೆ ಹೂವಿನ ಮಾಲೆ ಇನ್ನೂ ಹಾಗೆ ಇದೇ, ಮೈ ಮೇಲೆ ಅಲ್ಲಲ್ಲಿ ಕೆಂಪು ಬಣ್ಣದ  ಕಲೆಗಳು ಎದ್ದು ಕಾಣುತ್ತಿವೆ. ಅವನು ಒಂದು ಮಾತನಾಡದೆ ಶವಾಸನದಲ್ಲಿ ನಿರತನಾಗಿದ್ದಾನೆ, ಕೆಲವು ಪರಿಚಿತರು ಅವನ ಎದೆಯ ಮೇಲೆ ಹೂ ಮಾಲೆಗಳನ್ನು ಇಟ್ಟು ಕಣ್ಣೊರೆಸಿಕೊಂಡು ಹಿಂದೇ ಸರಿಯುತ್ತಿದ್ದಾರೆ, ಇವಳಿಗೆ ದಿಕ್ಕು ತೋಚದಾಗಿದೆ, ಕಣ್ಣಲ್ಲಿ ಒಂದು ಹನಿ ನೀರಿಲ್ಲ ಅಸಲಿಗೆ ಇಲ್ಲಿ ನಡೆಯುತ್ತಿರುವುದು ವಾಸ್ತವವೋ ಕನಸೋ ಒಂದು ಅವಳಿಗೆ ತಿಳಿಯದೆ ನಿಂತಲ್ಲೇ ಕುಸಿಯುತ್ತಿದ್ದಾಳೆ. ಸಂತ್ವಾನ ಹೇಳುವಂತೆ ಕೆಲವು ಗೆಳತಿಯರ ಕೈಗಳು ಅವಳ ಭುಜವನ್ನು ಹಿಡಿದಿವೆ. ಅಲ್ಲಲ್ಲಿ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ ಅವಳಿಗೆ ಅವ್ಯಾವುದರ ಅರಿವಿಲ್ಲ, ಅವನ ಈ ಸಾವಿಗೆ ಇಲ್ಲಿ ಕಾರಣಬೇಕಿಲ್ಲ ಏಕೆಂದರೆ ಅವಳಪಾಲಿಗೆ ಜಗವೇ ನಿಂತಿದೆ. 

ಇಂದಿಗೆ ಇದೆಲ್ಲ ಗತಿಸಿ ಕೆಲವು ವರ್ಷಗಳೇ ಕಳೆದಿವೆ ಅವಳ ಜೊತೆ ಅವನಿಲ್ಲ ನಿಜ ಆದರೆ ಅವನು ಕೊಟ್ಟು ಬಿಟ್ಟು ಹೋದ ಅವನ ಪ್ರತಿರೂಪ ಮನೆಯ ತುಂಬಾ ಓಡಾಡುತ್ತ ಅವಳ ನೋವು ಮರೆಸಿದೆ. ಅವಳೀಗ ಅವಳಾಗಿಲ್ಲ  ಬದಲಿಗೆ ತನ್ನೆಲ್ಲ ದುಃಖವನ್ನು ಮರೆತು ನೆನಪುಗಳ ಹೊಂಡದಲಿ ಶುಭ್ರವಾಗಿ ಮೈದೆಳೆದು ಮತ್ತೆ ತಾವರೆಯಾಗಿ ಮೂಡಿದ್ದಾಳೆ. ತಾನಾಯಿತು ತನ್ನ ಮಗುವಾಯಿತು ಟಿವಿಯ ಮೇಲೆ ಇಟ್ಟ ಅವನ ನಗುತುಂಬಿದ ಚಿತ್ತಾರವಾಯಿತು ಇವುಗಳ ಜೊತೆ ಆಸ್ತಿಕತೆಯ ಬದಕು ಅವಳಿಗೆ ಶಾಂತಿಯನ್ನು ತಂದುಕೊಟ್ಟಿದೆ. ಈಗಾಕೆ ಆಶ್ರಮವೊಂದರಲ್ಲಿ  ಸೇವೆ ಮಾಡುತ್ತಿದ್ದಾಳೆ ಭಕ್ತಿ ಪಥದ ಬಗ್ಗೆ ಪ್ರತಿನಿತ್ಯ ನೂರಾರು ಜನರಿಗೆ ಪ್ರವಚನ ನೀಡುತ್ತಿದ್ದಾಳೆ, ಅವನು ಹೋದ ಎಂದೂ ಅವಳು ಕೊರಗಲಿಲ್ಲ ತನ್ನ ಮಗುವಿನ ಒಳ್ಳೆ ಭವಿಷ್ಯಕ್ಕೆ ದಾರಿಯಾಗುತ್ತಿದ್ದಾಳೆ ನೂರಾರು ನಿರಾಶ್ರಿತರಿಗೆ ಆಶ್ರಯ ನೀಡಿ ಅವರ ಕಷ್ಟ ಸುಖಗಳಲ್ಲಿ ಬಾಗಿಯಾಗುತ್ತಿದ್ದಾಳೆ,  ತನಗಾಗಿ ಅಲ್ಲಾ ತನ್ನ ಪ್ರೀತಿಸುವ ಮಗುವಿಗಾಗಿ ತನ್ನ ಪ್ರೀತಿಯಿಂದ ಸುತ್ತುವ ಆಶ್ರಮದ ಜನರಿಗಾಗಿ ಅವಳು ಶ್ರಮಿಸುತ್ತಿದ್ದಾಳೆ ಅವರಿಗಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡಿದ್ದಾಳೆ. - ಅವಳ ಈ ಕಥೆ ಕೇಳಿದರೆ ನಿಜ ಅನಿಸುತ್ತದಲ್ಲವ "ಈಗ ಇದದ್ದು ಕ್ಷಣಾರ್ಧದಲ್ಲಿ ಇರುವುದಿಲ್ಲ ಪ್ರೀತಿಸಿ ಆರಾಧಿಸಿ ಪೂಜಿಸೋ ಅಮೂಲ್ಯವಾದ ವಸ್ತು ಕೆಲವೊಮ್ಮೆ ನಮ್ಮಿಂದ ಹೇಳಲಾರದಷ್ಟು ದೂರ ಸಾಗುತ್ತದೆ, ಅದೆಷ್ಟೋ ಭಾವುಕ ಮನಸುಗಳ ಬಾಳಿನಲಿ ಈ ಮಾತು ನಿಜವಾಗಿರುತ್ತದೆ ಇದು ನಿಜ ಕೂಡ, ಜೀವನವೇ ಹೀಗೆ ಅಂದುಕೊಂಡಂತೆ ಏನು ಸಾಗಲು ಬಿಡುವುದಿಲ್ಲ, ಬೇಕೆಂದುಕೊಂಡದನ್ನು ಕೊಡುವುದಿಲ್ಲ ಊಹೆಗೂ ಮೀರಿದ ತಿರಿವುಗಳಿಗೆ ನಮ್ಮನ್ನು ತಂದು ನಿಲ್ಲಿಸಿ ತಾನು ಕೇಕೆ ಹಾಕಿ ಘಹಗಹಿಸಿ ನಗುತ್ತದೆ. ಯಾರನ್ನ ದೂರುವುದು ಯಾರಿಗೆ ಹಿಡಿಶಾಪ ಹಾಕುವುದು ಹೇಗೆ ಹಣೆಬರಹ ಬರೆದ ಬರಹಗಾರನನ್ನ ಹುಡುಕಿ ತಿದ್ದು ಎಂದೂ ಬೇಡುವುದು... ಇಂತಹ ಇಲ್ಲಸಲ್ಲದ ಪ್ರಶ್ನೆಗಳನ್ನ ಹುಟ್ಟುಹಾಕಿ ಉತ್ತರವಿಲ್ಲದೆ ಮುಳ್ಳುಗಳ ಹಾಸಿಗೆಯಮೇಲೆ ಮಲಗಿ ನೆಮ್ಮದಿ ಇರದೇ ಚಡಪಡಿಸುವಂತೆ ಮಾಡಿ ನಿರ್ಜೀವ ಸ್ಥಿತಿಗೆ ನಮ್ಮನ್ನು ತರುತ್ತದೆ ಈ ಜೀವನಬೆಂಬ ಜೀವನ ". ಹಾಗೆಂದು ಸುಮ್ಮನೆ ಕೂರಲು ಕೊರಗಲು ದುಃಖಕ್ಕೆ ಶರಣಾಗಲು ಆಗುತ್ತಾ..? ಬಂದದ್ದನ್ನು ಎದುರಿಸಿ ನಿಲ್ಲಬೇಕು..ಎಲ್ಲವನ್ನು ಮರೆಯಲಾಗದಿದ್ದರು ಕೆಲವೊಂದನ್ನು ಮರೆತು ಸಾಧನೆಯ ಹಾದಿ ಹಿಡಿಯಬೇಕು ವಿಧಿಯನ್ನ ಸೋಲಿಸಲಾಗದಿದ್ದರು ಬದುಕನ್ನ ಗೆಲ್ಲಬೇಕು, ದಿನ ಕಳೆದಂತೆ ನಮ್ಮ ಪಯಣದ ಕಡೆಯ ಕರೆ ಬರುತ್ತದೆ ಅಲ್ಲಿಯವರಿಗೂ ನಾವು ಅವಳಂತೆ ಬಾಳಬೇಕು..  

?ಮಂಜು.ಎಂ.ದೊಡ್ಡಮನಿ.

ದಾವಣಗೆರೆ

1 comment:

  1. Nice article Manju. Article gintha nanage neevu "ಜೀವನಬೆಂಬ ಜೀವನ" na helidhdhira alwa adhu thumba chennagidhe.

    ReplyDelete